ಬೆಂಗಳೂರು ಮೆಟ್ರೋ ರೈಲಿನಲ್ಲಿ ಜೋಗ ಜಲಪಾತದ ಭೋರ್ಗರೆತ

ಬೆಂಗಳೂರು : ಸಿಲಿಕಾನ್ ಸಿಟಿಯ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿದೆ ನಮ್ಮ ಮೆಟ್ರೋ ರೈಲು. ಬೆಂಗಳೂರು ಮಹಾನಗರದ ನಾಲ್ಕು ದಿಕ್ಕಿನಲ್ಲೂ ಮೆಟ್ರೋ ರೈಲು ಸಂಚರಿಸುತ್ತಿದೆ. ಪ್ರತಿದಿನ ಸಾವಿರಾರು ಜನ ಮೆಟ್ರೋ ರೈಲು ಹತ್ತುತ್ತಿದ್ದಾರೆ. ಟ್ರಾಫಿಕ್ ಜಾಮ್ನ ಕಿರಿಕಿರಿಯಿಲ್ಲದೆ, ಕೆಲವೇ ನಿಮಿಷದಲ್ಲಿ ನಗರದ ಒಂದು ತುದಿಯಿಂದ ಮತ್ತೊಂದು ತುದಿಗೆ ತಲುಪಲು ಮೆಟ್ರೋ ರೈಲು ಸಹಕಾರಿಯಾಗಿದೆ. ವಿಶೇಷ ಅಂದರೆ, ಬೆಂಗಳೂರಿನ ಮೆಟ್ರೋ ರೈಲು ಪ್ರಯಾಣಿಕರಿಗೆ ಜೋಗ ಜಲಪಾತದ ಭೋರ್ಗರೆತ ಕೇಳುತ್ತಿದೆ. ರಾಜಾ, ರಾಣಿ, ರಾಕೆಟ್, ರೋರರ್ ಕಣ್ಣಿಗೆ ಮುದ ನೀಡುತ್ತಿವೆ. ತಂಪು ತಂಪಾದ ಫೀಲ್ ಕೊಡುತ್ತಿವೆ.

ಬೆಂಗಳೂರಿನ ಮೆಟ್ರೋ ರೈಲಿಗೂ, ವಿಶ್ವವಿಖ್ಯಾತ ಜೋಗ ಜಲಪಾತಕ್ಕೂ ಸಂಬಂಧವೇನು ಅಂತೀರಾ. ಬೆಂಗಳೂರಿನ ಮೆಟ್ರೋ ರೈಲಿನ ಬೋಗಿಗಳಲ್ಲಿ ಎಲ್ಸಿಡಿ ಪರದೆಗಳಿವೆ. ಪ್ರತಿ ನಿಲ್ದಾಣದಲ್ಲೂ ಪರದೆ ಮೇಲೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ನಿಲ್ದಾಣದ ಹೆಸರು ಪ್ರಕಟವಾಗುತ್ತದೆ. ರೈಲು ಹೊರಟ ನಂತರ ಆ ಪರದೆಯಲ್ಲಿ ವಿಡಿಯೋಗಳು ಪ್ಲೇ ಆಗುತ್ತವೆ. ಆಗಲೇ ಜೋಗ ಜಲಪಾತದ ಸಮೃದ್ಧತೆ ಕಣ್ತುಂಬಿಕೊಳ್ಳುವ ಅವಕಾಶ ಸಿಗುವುದು. ಜೋಗ ಜಲಪಾತವನ್ನು ವೈಭವಯುತವಾಗಿ ಚಿತ್ರೀಕರಣ ಮಾಡಲಾಗಿದೆ. ಅದರ ತುಣುಕುಗಳನ್ನು ಮೆಟ್ರೋ ರೈಲಿನಲ್ಲಿ ಪ್ರಸಾರ ಮಾಡಲಾಗುತ್ತಿದೆ.

ರಾಜ್ಯದ ಕೆಲವೇ ಕೆಲವು ಪ್ರವಾಸಿ ತಾಣಗಳ ವಿಡಿಯೋಗಳನ್ನು ಮೆಟ್ರೋ ರೈಲಿನ ಎಲ್ಸಿಡಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಕುದುರೆಮುಖ, ಹಂಪಿ, ಮೈಸೂರು ಹೀಗೆ.. ಆಯ್ದ ಕೆಲವು ಪ್ರವಾಸಿ ತಾಣಗಳ ವಿಡಿಯೋಗಳನ್ನು ಸದ್ಯ ಬಿತ್ತರಿಸಲಾಗುತ್ತಿದೆ. ಬೆಂಗಳೂರಿನಲ್ಲಿ ನೆಲೆಸಿರುವ ಮಲೆನಾಡಿಗರು, ಅದರಲ್ಲೂ ಶಿವಮೊಗ್ಗದವರಿಗೆ ಮೆಟ್ರೋ ರೈಲಿನಲ್ಲಿ ಜೋಗ ಜಲಪಾತವನ್ನು ಕಣ್ತುಂಬಿಕೊಳ್ಳುವ ಭಾಗ್ಯ ಲಭಿಸಿದೆ. ಇದರಿಂದ ಮನಸು ಅರಳುತ್ತದೆ. ಮಲೆನಾಡ ತಂಪು, ಇಂಪು, ಕಂಪು ನೆನಪಿಗೆ ಬರುತ್ತದೆ. ಜೋಗ ಜಲಪಾತದ ಮುಂದೆ ನಿಂತ ಫೀಲ್ ಆಗುತ್ತದೆ.

One comment

Leave a comment